ಭೂಹಿಡುವಳಿ
	ಒಬ್ಬ ರೈತನ ಸ್ವಾಮ್ಯದಲ್ಲಿರುವ ಕೃಷಿಯೋಗ್ಯ ಜಮೀನಿನಲ್ಲಿ ಕೃಷಿಯಾಗಿರುವ ಜಮೀನು ಸಾಗುವಳಿಗೆ-ಹಿಡುವಳಿ ಎಂದು ಹೆಸರು. ಒಬ್ಬನ ಇಲ್ಲವೆ ಹಲವರ ಒಡೆತನಕ್ಕೆ ಸೇರಿದ ಕೃಷಿ ಭೂಮಿಗೆ ಒಡೆತನ ಭೂಹಿಡುವಳಿ ಎಂದೂ ಬೇಸಾಯಗಾರನಿಗೆ ಬೇಸಾಯದಲ್ಲೇ ಪೂರ್ಣ ಉದ್ಯೋಗ ನೀಡುವ ಭೂಹಿಡುವಳಿಗೆ ಆರ್ಥಿಕ ಭೂಹಿಡುವಳಿ ಎಂದೂ ಹೆಸರು. ಮೂಲ ಭೂಹಿಡುವಳಿ ಆರ್ಥಿಕ ಭೂಹಿಡುವಳಿಗಿಂತ ಚಿಕ್ಕದು. ಇದರ ಸಾಗುವಳಿಯಿಂದ ಕೃಷಿಕನಿಗೆ ಸರಿಯಾದ ಆದಾಯ ಸಿಗದು. ಭೂಹಿಡುವಳಿ ಅತಿ ಚಿಕ್ಕದಾಗಿದ್ದರೆ ಸಾಗುವಳಿ ಮಾಡುವುದೇ ಕಷ್ಟವಾಗುತ್ತದೆ. ಕೃಷಿಕನ ನಿರ್ವಹಣಾ ಸಾಮಥ್ರ್ಯ ಮತ್ತು ಆರ್ಥಿಕ ಸಂಪನ್ಮೂಲಗಳ ಪೂರ್ಣ ಉಪಯೋಗವನ್ನು ಮಾದರಿ ಹಿಡುವಳಿಯಲ್ಲಿ ಕಾಣಬಹುದು. ಮಾದರಿಹಿಡುವಳಿಯ ಗಾತ್ರ ಆರ್ಥಿಕ ಹಿಡುವಳಿಯ ಮೂರು ಪಟ್ಟಿಗಿಂತ ಹೆಚ್ಚಿರಬಾರದು. ಒಂದು ಕುಟುಂಬ ಬೇಸಾಯವನ್ನೇ ಅವಲಂಬಿಸಿದ್ದು ಕೃಷಿ ಆದಾಯವೇ ಅದರ ಮುಖ್ಯ ಆದಾಯವಾದಾಗ ಅದನ್ನು ಕುಟುಂಬ ಹಿಡುವಳಿ ಎನ್ನುತ್ತಾರೆ. ಸೂಕ್ತ ಕೃಷಿಯೋಗ್ಯ ಹಿಡುವಳಿಯ ಗಾತ್ರದ ನಿರ್ಧಾರ ಕಷ್ಟ. ಈ ಬಗ್ಗೆ ಅರ್ಥಶಾಸ್ತ್ರಜ್ಞರಲ್ಲೇ ಭಿನ್ನಾಭಿಪ್ರಾಯಗಳಿವೆ. ನಮ್ಮಲ್ಲಿ ಸಾಗುವಳಿ ಹಿಡುವಳಿಯ ಸರಾಸರಿ ಗಾತ್ರ ಎರಡು ಹೆಕ್ಟೇರ್. ಸಾಮಾನ್ಯವಾಗಿ ನಮ್ಮ ಹಿಡುವಳಿಗಳು ತುಂಬ ಚಿಕ್ಕವು; ಇವನ್ನು ಅವಲಂಬಿಸಿರುವ ಕೃಷಿಕರ ಮತ್ತು ಕೃಷಿ ಕುಟುಂಬಗಳ ಸಂಖ್ಯೆ ಹೆಚ್ಚು. ಮಧ್ಯಮ ಮತ್ತು ದೊಡ್ಡ ಹಿಡುವಳಿಗಳ ಸಂಖ್ಯೆ ಕಿರಿದು. ಆದರೆ ಇವು ಆವರಿಸಿಕೊಂಡಿರುವ ಕ್ಷೇತ್ರ ಹಿರಿದು.

	ಆಸ್ಟ್ರೇಲಿಯಾದ ಸರಾಸರಿ ಹಿಡುವಳಿ ಸುಮಾರು 310 ಹೆಕ್ಟೇರ್, ಕೆನಡ ಸುಮಾರು 91 ಹೆಕ್ಟೇರ್, ನ್ಯೂಜೀಲೆಂಡ್ ಸುಮಾರು 174 ಹೆಕ್ಟೇರ್, ಅಮೆರಿಕ ಸುಮಾರು 680 ಹೆಕ್ಟೇರ್, ಇಂಗ್ಲೆಂಡ್ ಸುಮಾರು 25 ಹೆಕ್ಟೇರ್, ಡೆನ್ಮಾರ್ಕ್ ಸುಮಾರು 16 ಹೆಕ್ಟೇರ್, ಹಾಲೆಂಡ್ ಸುಮಾರು 11 ಹೆಕ್ಟೇರ್, ಸ್ವೀಡನ್ ಸುಮಾರು 9 ಹೆಕ್ಟೇರ್‍ಗಳಿಗೆ ಹೋಲಿಸಿದರೆ ಭಾರತದಲ್ಲಿ ಹಿಡುವಳಿಗಳ ಗಾತ್ರ ಕೇವಲ 2 ಹೆಕ್ಟೇರ್. ಈ ಬಗೆಯ ಚಿಕ್ಕ ಹಿಡುವಳಿಗೆ ಮುಖ್ಯಕಾರಣ ಭೂವಿಭಜನೆ.

	ಭಾರತದಲ್ಲಿ ಬೇಸಾಯಗಾರರ ಸಂಖ್ಯೆ ಹೆಚ್ಚಿದೆ. ದುಡಿಯಬಲ್ಲವರಲ್ಲಿ ಶೇಕಡಾ 70ರಷ್ಟು ಜನ ಬೇಸಾಯದಲ್ಲಿ ತೊಡಗಿದ್ದಾರೆ. ದೇಶದ ವಾರಸುದಾರ ಮತ್ತು ಉತ್ತರಾಧಿಕಾರ ಕಾಯಿದೆಯಂತೆ ಹಿಂದು ಮತ್ತು ಮುಸ್ಲಿಮರ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಸಮಪಾಲು. ಈ ಹಂಚಿಕೆಯಿಂದಾಗಿ ಭೂಹಿಡುವಳಿ ಕಿರಿದಾಗುತ್ತ ಹೋಗುತ್ತದೆ. ಅವಿಭಕ್ತ ಕುಟುಂಬ ವ್ಯವಸ್ಥೆಯಲ್ಲಿ ಕುಟುಂಬದ ಸದಸ್ಯರೆಲ್ಲ ಒಟ್ಟಿಗೆ ಇದ್ದು ಒಟ್ಟಾಗಿ ಸಾಗುವಳಿ ಮಾಡುತ್ತಿದ್ದುದರಿಂದ ಭೂ ವಿಭಜನೆ ಇರಲಿಲ್ಲ. ಈಗ ಪಾಶ್ಚಾತ್ಯ ಶಿಕ್ಷಣ, ವ್ಯಕ್ತಿ ಪ್ರತ್ಯೇಕತಾವಾದ, ಔದ್ಯಮಿಕ ಅಭಿವೃದ್ಧಿ ಇತ್ಯಾದಿಗಳಿಂದ ಅವಿಭಕ್ತ ಕುಟುಂಬ ವ್ಯವಸ್ಥೆ ಕಡಿಮೆ. ಗ್ರಾಮೀಣ ಕೈಗಾರಿಕೆಗಳ ಅವನತಿಯಿಂದಾಗಿ ನಿರುದ್ಯೋಗಿಗಳಾದವರು ಭೂಸಾಗುವಳಿಯಲ್ಲಿ ತೊಡಗುವುದು ಅನಿವಾರ್ಯವಾಯಿತು. ಇವರೂ ಇದ್ದ ಭೂಮಿಯನ್ನೇ ಹಂಚಿಕೊಳ್ಳಬೇಕಾಯಿತು.

	ಭೂವಿಭಜನೆಯಿಂದಾಗಿ ಸಾಗುವಳಿ ಭೂಮಿ ನಷ್ಟವಾಗುತ್ತದೆ. ಒಂದು ಹಿಡುವಳಿಯಿಂದ ಇನ್ನೊಂದು ಹಿಡುವಳಿಗೆ ಹೋಗಲು ಕಾಲುದಾರಿ ಬೇಕು. ಹಿಡುವಳಿಗಳಿಗೆ ಬೇಲಿ ಹಾಕಬೇಕು. ಒಡ್ಡುಗಳನ್ನು ಕಟ್ಟಬೇಕು. ಇವುಗಳಿಗೆ ಶೇಕಡಾ 30ರಷ್ಟು ಭೂಮಿ ಪೋಲಾಗುತ್ತದೆ. ಚಿಕ್ಕ ಮತ್ತು ತುಂಡು ತುಂಡು ಹಿಡುವಳಿಗಳಿಗೆ ನೀರಾವರಿ ಸೌಲಭ್ಯಗಳನ್ನು ಒದಗಿಸುವುದು ಕಷ್ಟ ಮತ್ತು ಕೃಷಿಯಂತ್ರೋಪಕರಣ ಮತ್ತು ದನಕರುಗಳ ಸಂಪೂರ್ಣ ಉಪಯೋಗ ಅಸಾಧ್ಯ. ಕೃಷಿಕ ತನ್ನ ಒಂದು ಹಿಡುವಳಿಯಿಂದ ಇನ್ನೊಂದು ಹಿಡುವಳಿಗೆ ಸಾಗುವಳಿಗಾಗಿ ತನ್ನ ಕೃಷಿ ಯಂತ್ರೋಪಕರಣ ಮತ್ತು ದನಕರುಗಳೊಂದಿಗೆ ಆಗಾಗ ಹೋಗಿಬರಬೇಕಾಗುತ್ತದೆ. ಇದಕ್ಕಾಗಿ ಅವನ ಶ್ರಮ ಹಾಗೂ ಸಮಯ ವ್ಯಯವಾಗುತ್ತದೆ. ಚಿಕ್ಕ ಹಿಡುವಳಿಯ ವಿವಿಧ ಬೇಸಾಯಗಾರರ ಹಿಡುವಳಿ ಮೇರೆಗಳನ್ನು ನಿರ್ಧರಿಸುವಾಗ, ಒಂದು ಹಿಡುವಳಿಯಿಂದ ಇನ್ನೊಂದು ಹಿಡುವಳಿಗೆ ಹಾದುಹೋಗುವಾಗ ನೀರಾವರಿ ಸೌಲಭ್ಯಗಳನ್ನು ಹಿಡುವಳಿಗಳಿಗೆ ಪೂರೈಸುವಾಗ ಬೇಸಾಯಗಾರರಲ್ಲಿ ಜಗಳಗಳುಂಟಾಗಿ ಕಷ್ಟನಷ್ಟಗಳಿಗೀಡಾಗುತ್ತಾರೆ. ನ್ಯಾಯಾಲಯದ ಮೊರೆ ಹೋಗಿ ಇದ್ದಬದ್ದದ್ದನ್ನೂ ಕಳೆದುಕೊಳ್ಳುತ್ತಾರೆ. ಬೇರೆ ಬೇರೆ ಕಡೆ ಹರಡಿರುವ ಚಿಕ್ಕ ಹಿಡುವಳಿಗಳನ್ನು ಸರಿಯಾಗಿ ನೋಡಿಕೊಳ್ಳಲು ಆಗುವುದಿಲ್ಲ; ಮತ್ತು ಬೆಳೆಗಳ ರಕ್ಷಣೆ ಅಸಾಧ್ಯ. ಚಿಕ್ಕ ಹಿಡುವಳಿಗಳಲ್ಲಿ ಕೃಷಿ ಯಾಂತ್ರೀಕರಣ, ರಾಸಾಯನಿಕ ಕೃಷಿ, ನೀರಾವರಿ ಸೌಕರ್ಯ, ಅಧಿಕ ಉತ್ಪಾದನೆ ಅಸಾಧ್ಯ. ಚಿಕ್ಕ ಹಿಡುವಳಿಗಳಿಂದ ಕೆಲವು ಪ್ರಯೋಜನಗಳಿವೆ. ಪ್ರತಿಯೊಬ್ಬನಿಗೂ ತನ್ನ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು, ಪ್ರತಿಯೊಬ್ಬನೂ ನಿಷ್ಠೆಯಿಂದ ಬೇಸಾಯಮಾಡುತ್ತಾನೆ. ತುಂಡು ತುಂಡಾಗಿ ಹರಡಿದ್ದ ಹಿಡುವಳಿಗಳ ಮಣ್ಣಿನ ಫಲವತ್ತತೆ ವಿಭಿನ್ನ. ಇದರಿಂದ ವಿವಿಧ ಬೆಳೆಗಳನ್ನು ಬೆಳೆಸಬಹುದು. ಒಂದು ಭಾಗದ ಹೊಲ ಅತಿವೃಷ್ಟಿ ಇಲ್ಲವೆ ಅನಾವೃಷ್ಟಿಗೆ ಬಲಿಯಾಗಿ ಹಾಳಾದರೂ ಇನ್ನೊಂದು ಕಡೆಯ ಹೊಲದಲ್ಲಿ ಒಳ್ಳೆಯ ಫಸಲು ಬಂದರೆ ಕೃಷಿಕ ಬದುಕುತ್ತಾನೆ. ಪುಟ್ಟ ಹಿಡುವಳಿಗಳಲ್ಲಿ ವೈe್ಞÁನಿಕ ಬೇಸಾಯ ಅಳವಡಿಸಿ ಕೃಷಿ ಉತ್ಪಾದನೆ ಹೆಚ್ಚಿಸುವುದು ಸುಲಭ.

	ಭೂವಿಭಜನೆಯನ್ನು ತಡೆಯದಿದ್ದರೆ ಭಾರತದ ಬೇಸಾಯವನ್ನು ಸುಧಾರಿಸುವುದು ಸಾಧ್ಯವಿಲ್ಲ. ಅದಕ್ಕಾಗಿ ಆರ್ಥಿಕ ಹಿಡುವಳಿಗಳನ್ನು ನಿರ್ಮಿಸಬೇಕು. ಇದು ಭೂಮಿಯ ಭೌಗೋಳಿಕ ಮತ್ತು ಹವೆಯ ಸ್ಥಿತಿಗತಿ, ಮಣ್ಣಿನ ಫಲವತ್ತತೆ, ನೀರು, ಗೊಬ್ಬರ ಸೌಲಭ್ಯ ಮುಂತಾದವನ್ನು ಅವಲಂಬಿಸಿರುತ್ತದೆ. ಇಷ್ಟಾದರೂ ಒಂದು ಪ್ರದೇಶದ ಆರ್ಥಿಕ ಹಿಡುವಳಿ ಇನ್ನೊಂದು ಪ್ರದೇಶಕ್ಕೆ ಅನ್ವಯಿಸುವುದಿಲ್ಲ. ಆದ್ದರಿಂದ ಭಾರತದಲ್ಲಿ ಆರ್ಥಿಕ ಹಿಡುವಳಿ ಒಂದೇ ಬಗೆಯಾಗಿಲ್ಲ. ಇದನ್ನು ನಿರ್ಮಿಸಲು ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಬಹುದು. ಹಿಡುವಳಿಗಳಿಗೆ ಗರಿಷ್ಠ ಮಿತಿಯನ್ನು ನಿಗದಿಪಡಿಸುವುದು. ಆರ್ಥಿಕ ಹಿಡುವಳಿಗಿಂತ ಅಧಿಕ ಜಮೀನನ್ನು ಇಟ್ಟುಕೊಂಡ ಕೃಷಿಕರಿಂದ ಸರ್ಕಾರ ಜಮೀನನ್ನು ತೆಗೆದುಕೊಂಡು ಅದನ್ನು ಆರ್ಥಿಕ ಹಿಡುವಳಿ ಇಲ್ಲದ ಕೃಷಿಕರಿಗೆ ಹಂಚುವುದು; ಅತಿ ಚಿಕ್ಕ ಹಿಡುವಳಿಗಾರರು ಪಕ್ಕದ ಸಾಗುವಳಿದಾರರಿಗೆ ತಮ್ಮ ಅತಿ ಸಣ್ಣ ಹಿಡುವಳಿಗಳನ್ನು ಮಾರಿ ತಾವು ಬೇರೆ ಉದ್ಯೋಗಗಳಲ್ಲಿ ತೊಡಗುವುದು ಇತ್ಯಾದಿ. ಹಳ್ಳಿಗಳಲ್ಲಿ ಗ್ರಾಮೀಣ ಮತ್ತು ಗುಡಿಕೈಗಾರಿಕೆಗಳನ್ನು ಸ್ಥಾಪಿಸಬೇಕು. ಈ ಕೈಗಾರಿಕೆಗಳು ಭೂರಹಿತ ಕೃಷಿಕಾರ್ಮಿಕರಿಗೆ ಮತ್ತು ಚಿಕ್ಕ ಹಿಡುವಳಿದಾರರಿಗೆ ಉದ್ಯೋಗ ಒದಗಿಸಬೇಕು. ಆಗ ಬೇಸಾಯದಲ್ಲಿರುವ ಜನಸಂಖ್ಯೆಯ ಒತ್ತಡ ತಗ್ಗಿಸಬಹುದು. ಆದರೆ ಈ ಕ್ರಮಗಳನ್ನೆಲ್ಲ ಕಾರ್ಯಾಚರಣೆಗೆ ತರಲು ಅನೇಕ ತೊಡಕುಗಳಿವೆ. ಭಾರತದ ವಿವಿಧ ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿಭಿನ್ನ ಭೂಪರಿಸ್ಥಿತಿಯಿದೆ, ಇದರಿಂದ ಆರ್ಥಿಕ ಹಿಡುವಳಿಯ ಗಾತ್ರ ನಿರ್ಧಾರ ಕಷ್ಟ. ಭಾರತದಲ್ಲಿ ಅತಿಚಿಕ್ಕ ಹಿಡುವಳಿಗಳ ಸಂಖ್ಯೆ ಅತ್ಯಧಿಕ. ಇವನ್ನೆಲ್ಲ ಆರ್ಥಿಕ ಹಿಡುವಳಿಗಳಾಗಿ ಪರಿವರ್ತಿಸುವುದು ಕಠಿಣ. ಸಾಗುವಳಿದಾರರಿಗೆಲ್ಲ ಭೂಸ್ವಾಮ್ಯದ ಆಸೆ ವಿಪರೀತ. ಆದ್ದರಿಂದ ಶ್ರೀಮಂತ ಕೃಷಿಕರು ಆರ್ಥಿಕ ಹಿಡುವಳಿಗಳನ್ನು ಮೀರಿ ತಮ್ಮಲ್ಲಿರುವ ಅಧಿಕ ಹಿಡುವಳಿಗಳನ್ನು ಬಿಟ್ಟುಕೊಡಲು ಸಿದ್ಧರಾಗಿರುವುದಿಲ್ಲ. ಚಿಕ್ಕ ಹಿಡುವಳಿಗಳಲ್ಲಿದ್ದ ಬಡ ಬೇಸಾಯಗಾರರು ಸಹ ತಮ್ಮ ಅತಿ ಚಿಕ್ಕ ಹಿಡುವಳಿಗಳನ್ನು ಬಿಟ್ಟುಕೊಡಲು ಸಿದ್ಧರಿಲ್ಲ. ಇದರಿಂದಾಗಿ ಆರ್ಥಿಕ ಹಿಡುವಳಿಗಳನ್ನು ರೂಪಿಸುವುದು ಕಷ್ಟ. ಪ್ರಜಾಪ್ರಭುತ್ವದಲ್ಲಿ ಆರ್ಥಿಕ ಹಿಡುವಳಿಗಳನ್ನು ನಿರ್ಮಿಸಲು ಕಠಿಣ ಕಾನೂನು ಕ್ರಮಗಳನ್ನು ತರುವುದು ಪ್ರಜಾಪ್ರಭುತ್ವ ತತ್ತ್ವಗಳಿಗೆ ವಿರುದ್ಧವಾಗುತ್ತದೆ. ಇದ್ದ ಹಿಡುವಳಿಗಳನ್ನು ಆರ್ಥಿಕ ಹಿಡುವಳಿಗಳಾಗಿ ಪರಿವರ್ತಿಸಿದರೆ ಬಹಳ ಮಂದಿ ಬೇಸಾಯಗಾರರು ತಮ್ಮ ಭೂಮಿಯನ್ನು ಕಳೆದುಕೊಂಡು ನಿರುದ್ಯೋಗಿಗಳಾಗುತ್ತಾರೆ. ಇದರಿಂದ ಆರ್ಥಿಕ ಅವ್ಯವಸ್ಥೆ ಉಂಟಾಗಬಹುದು. ಭೂ ಆಸ್ತಿ ಹಿರಿಯಮಗನಿಗೆ ಮಾತ್ರ ಸಿಗಬೇಕು ಎಂಬ ಶಾಸನ ಜಾರಿಗೆ ತರಬಹುದು. ಆದರೆ ಇದಕ್ಕೆ ನಮ್ಮ ವಾರಸುದಾರ ಮತ್ತು ಉತ್ತರಾಧಿಕಾರ ಶಾಸನ ಅಡ್ಡಿಬರುತ್ತದೆ. ಸರ್ಕಾರ ಭೂಹಿಡುವಳಿಯ ಕನಿಷ್ಠ ಇಲ್ಲವೆ ಗರಿಷ್ಠ ಮಿತಿಯನ್ನು ನಿರ್ಧರಿಸಬಹುದು. ಇಂಥ ಹಿಡುವಳಿಗಳನ್ನು ಪುನಃ ವಿಭಜಿಸಬಾರದೆಂದು ಕಾಯಿದೆ ಮಾಡಬಹುದು. ಸರ್ಕಾರದ ಅನುಮತಿ ಇಲ್ಲದೆ ತುಂಡು ಭೂಮಿಗಳನ್ನು ಮಾರಾಟ ಮಾಡಬಾರದು ಎಂದು ಹೇಳಬಹುದು. ತುಂಡು ತುಂಡು ಹಿಡುವಳಿಗಳನ್ನು ಪಕ್ಕದ ಹಿಡುವಳಿದಾರರಿಗೆ ಮಾತ್ರ ಮಾರಬೇಕು ಎನ್ನುವ ಕಾನೂನು ನಿರ್ಬಂಧ ಹೇರಬಹುದು. ಭಾರತದಲ್ಲಿ ಅನೇಕ ರಾಜ್ಯಗಳು ಈ ಬಗೆಯ ಶಾಸನಗಳನ್ನು ಜಾರಿಗೆ ತಂದಿವೆ. ಆದರೆ ಅವುಗಳ ಪರಿಣಾಮ ತೃಪ್ತಿಕರವಾಗಿಲ್ಲ. ಚಿಕ್ಕ ಹಿಡುವಳಿಗಳ ಕ್ರೋಢೀಕರಣದಿಂದ ಆರ್ಥಿಕ ಹಿಡುವಳಿಗಳ ನಿರ್ಮಾಣ ಸಾಧ್ಯ. ಇದರಿಂದ ಕೃಷಿಕರಿಗೆ ಒಂದೇ ಸ್ಥಳದಲ್ಲಿ ಆರ್ಥಿಕ ಹಿಡುವಳಿ ಸಿಗುತ್ತದೆ. ಕ್ರೋಢೀಕರಣ ಸ್ವಯಂಪ್ರೇರಿತ ಅಥವಾ ಕಡ್ಡಾಯ ಆಗಬಹುದು. ಸ್ವಯಂಪ್ರೇರಿತ ಕೃಷಿಕರು ಪರಸ್ಪರ ಒಪ್ಪಿಗೆಯಿಂದ ತುಂಡು ತುಂಡು ಹಿಡುವಳಿಗಳ ಕ್ರೋಢೀಕರಣ ಕೈಗೊಳ್ಳಬಹುದು. ಬೇರೆ ಬೇರೆ ಸ್ಥಳಗಳಲ್ಲಿನ ತಮ್ಮ ಹಿಡುವಳಿಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡು ಒಂದೆಡೆ ಆರ್ಥಿಕ ಹಿಡುವಳಿಗಳನ್ನು ಪಡೆಯಬಹುದು. ಆದರೆ ಸ್ವಪ್ರೇರಣೆಯ ಕ್ರೋಢೀಕರಣದ ಯಶಸ್ಸು ತುಂಬಾ ಕಠಿಣ. ಏಕೆಂದರೆ ನಮ್ಮ ಕೃಷಿಕರ ಭೂವ್ಯಾಮೋಹ ವಿಪರೀತ. ಜೊತೆಗೆ ಎಲ್ಲ ಭೂಹಿಡುವಳಿಗಳ ಫಲವತ್ತತೆ ಒಂದೇ ತೆರನಾಗಿರುವುದಿಲ್ಲ. ನಮ್ಮ ಕೃಷಿಕರಲ್ಲಿ ಸಹಕಾರದ ಮನೋಭಾವ ಕಮ್ಮಿ.

	ಕಡ್ಡಾಯ ಕ್ರೋಢೀಕರಣ ಕಾಯಿದೆಯ ಜಾರಿಯಿಂದ ತುಂಡು, ತುಂಡು ಹಿಡುವಳಿಗಳ ಕ್ರೋಢೀಕರಣ ಸಾಧ್ಯ. ಕಾಯಿದೆಯ ಪ್ರಕಾರ ಕೃಷಿಕರು ತಮ್ಮ ತುಂಡು ಹಿಡುವಳಿಗಳನ್ನು ಕ್ರೋಢೀಕರಿಸುವುದು ಅನಿವಾರ್ಯವಾಗುತ್ತದೆ. 1947ರಲ್ಲಿ ಆಗಿನ ಮುಂಬಯಿ ಸರ್ಕಾರ ಭೂಕ್ರೋಢೀಕರಣ ಕಾಯಿದೆಯನ್ನು ಜಾರಿಗೆ ತಂದಿತು. ಪಂಜಾಬ್ 1948ರಲ್ಲಿ, ಉತ್ತರ ಪ್ರದೇಶ ಮತ್ತು ಹಿಮಾಚಲ ಪ್ರದೇಶ 1953ರಲ್ಲಿ, ರಾಜಸ್ಥಾನ 1954ರಲ್ಲಿ, ಪಶ್ಚಿಮಬಂಗಾಳ 1955ರಲ್ಲಿ, ಆಂಧ್ರಪ್ರದೇಶ ಮತ್ತು ಬಿಹಾರ 1956ರಲ್ಲಿ, ಮಧ್ಯಪ್ರದೇಶ 1959ರಲ್ಲಿ ಅಸ್ಸಾಮ್ 1960ರಲ್ಲಿ ಜಮ್ಮು ಮತ್ತು ಕಾಶ್ಮೀರ 1962ರಲ್ಲಿ, ಕರ್ನಾಟಕ 1966ರಲ್ಲಿ ಒರಿಸ್ಸಾ 1972ರಲ್ಲಿ, ಭೂಕ್ರೋಢೀಕರಣ ಕಾಯಿದೆಗಳನ್ನು ಜಾರಿಗೆ ತಂದುವು. ತಮಿಳುನಾಡು ಮತ್ತು ಕೇರಳ ರಾಜ್ಯಗಳು ಅರುಣಾಚಲ ಪ್ರದೇಶ, ಮೇಘಾಲಯ, ಮಣಿಪುರ, ನಾಗಾಲ್ಯಾಂಡ್, ತ್ರಿಪುರ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಭೂಕ್ರೋಢೀಕರಣ ಕಾಯಿದೆಯಿಲ್ಲ.

	ಭೂವಿಭಜನೆ ಮತ್ತು ಭೂಛಿದ್ರೀಕರಣದ ದುಷ್ಟರಿಣಾಮಗಳನ್ನು ನಿವಾರಿಸಲು ಭೂಕ್ರೋಢೀಕರಣ ಶಾಶ್ವತವಾದ ಪರಿಹಾರೋಪಾಯವಲ್ಲ. ಭೂವಿಭಜನೆ ಮತ್ತು ಭೂಛಿದ್ರೀಕರಣದ ಕಾರಣಗಳನ್ನು ಮೊದಲು ಹೋಗಲಾಡಿಸಬೇಕು. ಕಾನೂನು ಬದ್ಧವಾಗಿ ಮಾದರಿ ಹಿಡುವಳಿಗಳನ್ನು ನಿಗದಿಪಡಿಸಬೇಕು. ಹಿಡುವಳಿಗಳು ಈ ಮಾದರಿ ಹಿಡುವಳಿಗಿಂತ ಕಡಿಮೆ ಇರದಂತೆ ನೋಡಿಕೊಳ್ಳಬೇಕು. ಇದಕ್ಕೆಲ್ಲ ಕ್ರಮ ಅಗತ್ಯ. ಕೆಲವು ರಾಜ್ಯ ಸರ್ಕಾರಗಳು ಮಾದರಿ ಹಿಡುವಳಿಗಳನ್ನು ನಿಗದಿಪಡಿಸಿವೆ.

	ಚಿಕ್ಕ ಹಿಡುವಳಿಗಳ ಮತ್ತು ಭೂವಿಭಜನೆಯ ದುಷ್ಪರಿಣಾಮಗಳನ್ನು ತಡೆಗಟ್ಟಲು ಸಹಕಾರಿ ಬೇಸಾಯ ನೆರವಾಗಬಹುದು. ಒಂದು ಪ್ರದೇಶಕ್ಕೆ ಸೇರಿದ ಕೃಷಿಕರಿಗೆಲ್ಲ ಈ ಸಹಕಾರಿ ಬೇಸಾಯ ಸಂಘದ ಸದಸ್ಯತ್ವ ಕಡ್ಡಾಯವಾಗಬೇಕು. ಇವರು ತಮ್ಮ ಭೂಮಿಯನ್ನು ಒಟ್ಟುಗೂಡಿಸಿ ಸಾಗುವಳಿ ಮಾಡಿ ಬಂದ ಕೃಷಿ ಉತ್ಪನ್ನವನ್ನು ಸಂಘಕ್ಕೆ ತಾವು ನೀಡಿದ ಭೂಮಿ ಮತ್ತು ದುಡಿಮೆಗಳ ಆಧಾರದ ಮೇಲೆ ಹಂಚಿಕೊಳ್ಳುವಂತಾಗಬೇಕು. ಕೃಷಿಕ ವೈಯಕ್ತಿಕವಾಗಿ ಸಾಧಿಸಲು ಆಗದೆ ಇದ್ದುದ್ದನ್ನು ಸಹಕಾರಿ ಬೇಸಾಯ ಸಂಘದ ಮೂಲಕ ಸಾಧಿಸಲು ಸಾಧ್ಯ. 									
(ಡಿ.ಎನ್.ಆರ್.)
									      (ಪರಿಷ್ಕರಣೆ : ಡಾ. ಟಿ ಎನ್ ಪ್ರಕಾಶ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ